ಕುಮಟಾ, ಮಾರ್ಚ್ 10: ತೀರ ರಕ್ಷಣಾ ಪಡೆಯ ಅಧಿಕಾರಿಗಳು ಗಾಂಜಾ ಮಾದಕವಸ್ತುವನ್ನು ಹೊಂದಿರುವ ಹಾಗೂ ಬೆಳೆಯುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ಗೋಕರ್ಣ ಸಮೀಪದ ಬೆಳೆಹತ್ತಲ ಗ್ರಾಮದ ಮೋಹನ ಗೌಡ (22) ಎಂಬುವರು ತಮ್ಮ ಮನೆಯ ಹಿಂಭಾಗದಲ್ಲಿ ಗಾಂಜಾ ಬೆಳೆ ಬೆಳೆಯುತ್ತಿದ್ದು ರಹಸ್ಯವಾಗಿ ಗಾಂಜಾವನ್ನು ವಿದೇಶೀಯರಿಗೆ ಮಾರುತ್ತಿದ್ದರು. ಇವರಿಂದ ಗಾಂಜಾ ಖರೀದಿಸಿದ ರಷ್ಯನ್ ಪ್ರಜೆ ಅಲೆಕ್ಸ್ ಮೈಕಲ್ (27) ಎಂಬುವರು ಮತ್ತರಾಗಿ ತೀರದಲ್ಲಿ ಅಡ್ಡಾಡುತ್ತಿದ್ದಾಗ ತೀರ ರಕ್ಷಣಾ ಪಡೆಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ತಪಾಸಣೆಗೊಳಪಡಿಸಿದಾಗ ಮೂರು ಸಾವಿರ ರೂ ಮೌಲ್ಯದ ನೂರು ಗ್ರಾಂ ಗಾಂಜಾ ಅವರಲ್ಲಿ ಪತ್ತೆಯಾಯಿತು.
ಬಳಿಕ ಅಲೆಕ್ಸ್ ರನ್ನು ವಿಚಾರಣೆಗೊಳಪಡಿಸಿದ ಬಳಿಕ ಮೋಹನಗೌಡನ ಮನೆಯ ಮೇಲೆ ಧಾಳಿ ನಡೆಸಿ ಅಕ್ರಮ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.